ಕರ್ನಾಟಕ ರಾಜ್ಯದಲ್ಲಿ ಕೃಷಿ ಮಾರಾಟ ಸುಧಾರಣೆ ನಡೆದು ಬಂದ ದಾರಿ ರಾಷ್ಟ್ರಕ್ಕೆ ಮಾದರಿ

ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೃಷಿ ಕ್ಷೇತ್ರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಸೀಮಿತ ಮೂಲ ಸೌಕರ್ಯಗಳುಳ್ಳ ನಿಯಂತ್ರಿತ ಮಾರುಕಟ್ಟೆ ಪ್ರಾಂಗಣಗಳಲ್ಲೇ ಮಾರಾಟ ಮಾಡುವ ಅನಿವಾರ್ಯತೆ, ರೈತರಿಗೆ ಅನಾನುಕೂಲ ಮಾರುಕಟ್ಟೆ ಸ್ಥಿತಿ, ಏಕಸ್ವಾಮ್ಯ ಪದ್ಧತಿಗಳು, ಖರೀದಿದಾರರಲ್ಲಿ ಸೀಮಿತ ಸ್ಪರ್ಧೆ ಮತ್ತು ಇನ್ನಿತರೆ ಸಮಸ್ಯೆಗಳು ಇಂದಿನ ಮಾರುಕಟ್ಟೆ ಸ್ಥಿತಿಯಾಗಿರುತ್ತವೆ.
ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರವನ್ನು  ಒಂದು ಉದ್ಯಮವಾಗಿ ಬೆಳೆಸಬೇಕೆಂದು ಕರ್ನಾಟಕ ಸರ್ಕಾರ ದೇಶದಲ್ಲಿಯೇ ಪ್ರಪ್ರಥಮವಾಗಿ ಕೃಷಿ ಮಾರಾಟ ಸುಧಾರಣಾ ವರದಿಯನ್ನು ಸಿದ್ದಪಡಿಸುವ ಸಂಬಂಧ ಮಹತ್ವದ ನಿರ್ಧಾರವನ್ನು ಕೈಗೊಂಡಿತ್ತು. ಈ ವಿಚಾರವಾಗಿ 2013ನೇ ಮಾರ್ಚ್‍ನಲ್ಲಿ ಕೃಷಿ ಮಾರಾಟ ಸುಧಾರಣಾ ಸಮಿತಿಯನ್ನು ರಚಿಸಿತ್ತು.

ಸುಧಾರಣಾ ಸಮಿತಿ ರಚನೆ ಉದ್ದೇಶ :

ರಾಜ್ಯ ಕೃಷಿ ಮಾರಾಟ ಕ್ಷೇತ್ರದಲ್ಲಿನ ಪ್ರಸ್ತುತ ಮಾರಾಟ ಪದ್ಧತಿಯಲ್ಲಿರುವ ಕುಂದು-ಕೊರತೆಗಳನ್ನು ಹೋಗಲಾಡಿಸಲು ಬೇಕಾದ ಸುಧಾರಣೆ ಕ್ರಮಗಳು. ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ನಿರ್ಬಂಧರಹಿತ ಮಾರುಕಟ್ಟೆ ಪದ್ದತಿಯನ್ನು ಜಾರಿಗೆ ತರುವ ಬಗ್ಗೆ ಮತ್ತು ಮಾರುಕಟ್ಟೆಯ ಕ್ಷಮತೆ ಮತ್ತು ಉತ್ಪನ್ನಗಳ ಖರೀದಿಗೆ ಸ್ಫರ್ಧೆ ಹಾಗೂ ಮಾರಾಟದ ಎಲ್ಲಾ ಚಟುವಟಿಕೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಕುರಿತು ಮಾಹಿತಿ ತಂತ್ರಜ್ಞಾನ ಅಳವಡಿಸುವುದು ಸೇರಿದಂತೆ ಇತರೇ ಅಗತ್ಯ ಅಂಶಗಳ ಕುರಿತು ವರದಿ ಸಿದ್ದಪಡಿಸಲು ಶ್ರೀ. ಮನೋಜ್ ರಾಜನ್, ಐಎಫ್‍ಎಸ್, ಅಪರ ಕಾರ್ಯದರ್ಶಿ, ಕರ್ನಾಟಕ ಸರ್ಕಾರ. ಇವರ ನೇತೃತ್ವದಲ್ಲಿ ಕೃಷಿ ಮಾರಾಟ ಸುಧಾರಣಾ ಸಮಿತಿಯನ್ನು ರಚಿಸಲಾಯಿತ್ತು.

ಸುಧಾರಣಾ ಸಮಿತಿಯ ಕಾರ್ಯವಿಧಾನ :

• ಕೃಷಿ ಮಾರಾಟ ಸುಧಾರಣಾ ಸಮಿತಿ ವರದಿ ಸಿದ್ದಪಡಿಸುವ ಪೂರ್ವದಲ್ಲಿ ಅಂದರೆ 2013ರ ಏಪ್ರಿಲ್ ತಿಂಗಳಲ್ಲಿ 5 ಬಾರಿ ಸಭೆಗಳನ್ನು ನಡೆಸಿತ್ತು, ಜೊತೆಗೆ ಸಮಿತಿ ಸದಸ್ಯರೊಂದಿಗೆ ಅಧ್ಯಕ್ಷರು ಹಲವು ಆಂತರಿಕ ಸಭೆಗಳನ್ನು ನಡೆಸಿದ್ದಾರೆ. ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಮತ್ತು ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘಗಳೊಂದಿಗೆ ಸಭೆಗಳನ್ನು ನಡೆಸಿದೆ. ಸಮಿತಿಯ ಸಭೆಗಳಿಗೆ ವಿಷಯ ಪರಿಣಿತರನ್ನು ವಿಶೇಷವಾಗಿ ಆಹ್ವಾನಿಸಿ, ಕೃಷಿ ಉತ್ಪನ್ನ ಮಾರಾಟದ ಸುಧಾರಣೆ ಕುರಿತಾಗಿ ವಿವರವಾಗಿ ಚರ್ಚಿಸಿ, ಸಲಹೆಗಳನ್ನು ಸಮಿತಿ ಪಡೆದಿದೆ.
• ಕೃಷಿ ಉತ್ಪನ್ನ ಮಾರುಕಟ್ಟೆಗಳ ಅಧ್ಯಯನ ಭೇಟಿ, ಕೃಷಿ ಮಾರಾಟ ಸುಧಾರಣಾ ಸಮಿತಿಯು ವಿವಿಧ ಭಾಗಗಳಲ್ಲಿನ ಆರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ, ದಲ್ಲಾಲರ ಅಂಗಡಿಗಳಿಗೆ ಟಿ.ಎ.ಪಿ.ಎಂ.ಎಸ್‍ಗಳಿಗೆ, ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಿಗೆ, ಎರಡು ಸಂಸ್ಕರಣಾ ಘಟಕಗಳಿಗೆ ಮತ್ತು ಮುಂಬೈನಲ್ಲಿರುವ ಒಂದು ವಿನಿಮಯ ಕೇಂದ್ರಕ್ಕೆ ಭೇಟಿ ನೀಡಿ ಸುಧಾರಣಾ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿದೆ.
• ಮಾರುಕಟ್ಟೆ ಭಾಗೀದಾರರ ಕಾರ್ಯಗಾರ, ಸುಧಾರಣಾ ಸಮಿತಿಯು ಮಾರುಕಟ್ಟೆ ಭಾಗೀದಾರರ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯಲು 2013ರ ಮೇ2 ರಂದು ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ವಿಶೇಷವಾದ ಒಂದು ದಿನದ ಕಾರ್ಯಾಗಾರವನ್ನು ನಡೆಸಿದೆ. ಈ ಕಾರ್ಯಗಾರದಲ್ಲಿ ರೈತರು, ರೈತ ಪರ ಸಂಘಟನೆಗಳು, ವ್ಯಾಪಾರಸ್ಥರು, ದಲ್ಲಾಲರು, ಉಗ್ರಾಣ ಸೇವೆ ಒದಗಿಸುವವರು, ಉತ್ಪನ್ನ ಗುಣ ಪರೀಕ್ಷೆ ಮಾಡುವ ಸಂಸ್ಥೆಗಳು, ಬ್ಯಾಂಕರ್ ಗಳು, ಉತ್ಪನ್ನ ವಿನಿಮಯ ಕೇಂದ್ರಗಳ ಪರಿಣಿತರು, ಕೃಷಿ ಮಾರಾಟ ಕ್ಷೇತ್ರದ ಪರಿಣಿತರು ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ಭಾಗವಹಿಸಿರುತ್ತಾರೆ. ಇವರುಗಳೊಂದಿಗೆ ಸಮಿತಿಯು ಹಲವಾರು ವಿಷಯಗಳ ಕುರಿತು ವಿವರವಾಗಿ ಚರ್ಚಿಸಿ, ಮಾರುಕಟ್ಟೆಗಳ ಆಧುನೀಕರಣಕ್ಕೆ ಸಂಭಂದಿಸಿದಂತೆ ಸಲಹೆಗಳನ್ನು ಪಡೆದು ತನ್ನ ವರದಿಯಲ್ಲಿ ಕ್ರೋಢಿಕರಿಸಿದೆ.

ಸರ್ಕಾರಕ್ಕೆ ವರದಿ ಸಲ್ಲಿಕೆ :

ಕೃಷಿ ಕ್ಷೇತ್ರವನ್ನು ಸಮೃದ್ಧಿಗೊಳಿಸುವ ಮೂಲಕ ರೈತರ ಸಬಲೀಕರಣಕ್ಕಾಗಿ ಸರ್ಕಾರ ಮಹತ್ವದ ಯೋಜನೆ ಕೈಗೊಂಡಿರುವುದನ್ನು ಮನಗಂಡ ಕೃಷಿ ಮಾರಾಟ ಸುಧಾರಣಾ ಸಮಿತಿಯು ನಿಗದಿತ ಸಮಯದಲ್ಲಿ ಕೃಷಿ ಉತ್ಪನ್ನ ಮಾರಾಟ ಕ್ಷೇತ್ರಕ್ಕೆ ಉಪಯುಕ್ತವಾಗುವಂತಹ ಸಮಗ್ರ ವರದಿಯನ್ನು ಸಿದ್ಧಪಡಿಸಿ, ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಕೈಗೊಳ್ಳಬೇಕಾದ ಆಧುನಿಕ ಕ್ರಮಗಳು ಮತ್ತು ಇದಕ್ಕೆ ಬೇಕಾದ ಶಾಸನ ನಿಯಮಗಳಿಗೆ ತಿದ್ದುಪಡಿ ತರುವ ಅಂಶಗಳ ಕುರಿತು ಸಮಿತಿಯು ಶಿಫಾರಸ್ಸುಗಳೊಂದಿಗೆ ವರದಿಯನ್ನು ಮೇ 2013ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು.

ಕೃಷಿ ಮಾರಾಟ ಸುಧಾರಣಾ ಸಮಿತಿ ನೀಡಿದ ಶಿಫಾರಸ್ಸುಗಳು ಏನು?
• ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಪಾರದರ್ಶಕತೆ,ದಕ್ಷತೆ ಮತ್ತು ಸರಳತೆ ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಅಳವಡಿಕೆ.
• ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ನೈಜ ಮಾರಾಟಕ್ಕಾಗಿ ವಿದ್ಯುನ್ಮಾನ ವೇದಿಕೆ ಸ್ಥಾಪನೆ.
• ಮಾರುಕಟ್ಟೆಗಳಿಗೆ ಉತ್ಪನ್ನಗಳ ಪ್ರವೇಶದಿಂದ ಹಿಡಿದು ಎಲ್ಲಾ ವ್ಯಾಪಾರ ವಹಿವಾಟುಗಳು ಗಣಕೀಕೃತಗೊಳಿಸುವ ವೇದಿಕೆ       ಕಲ್ಪಿಸುವುದು.
• ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಲು ಪ್ರಯೋಗಾಲಯಗಳ ಸ್ಥಾಪನೆ.
• ಉತ್ಪನ್ನಗಳ ಗುಣವಿಶ್ಲೇಷಣೆ ಮಾಹಿತಿಯನ್ನು ಆನ್‍ಲೈನ್ ಪ್ರಸಾರ ಮಾಡುವುದು.
• ಉಗ್ರಾಣ ಆಧಾರಿತ ಮಾರಾಟಕ್ಕೆ ಅನುಕೂಲ ಕಲ್ಪಿಸುವುದು.
• ಖರೀದಿದಾರರಿಗೆ ಏಕೀಕೃತ ಲೈಸನ್ಸ್ ನೀಡುವುದು.

ಈ ರೀತಿ ಹಲವು ಶಿಫಾರಸ್ಸುಗಳನ್ನು ಸುಧಾರಣಾ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಕರ್ನಾಟಕ ಸರ್ಕಾರ ಕೃಷಿ ಮಾರಾಟ ಸುಧಾರಣಾ ಸಮಿತಿ ಸಲ್ಲಿಸಿದ ಶಿಫಾರಸ್ಸುಗಳನ್ನು ಒಪ್ಪಿ, ಕೃಷಿ ಉತ್ಪನ್ನ ಮಾರಾಟ ಕ್ಷೇತ್ರದ ಬಲವರ್ಧನೆಗಾಗಿ ಸಮಿತಿ ನೀಡಿದ ಶಿಫಾರಸ್ಸುಗಳನ್ನು ಜಾರಿಗೆ ತರುವುದಾಗಿ 2013ರ ಬಜೆಟ್‍ನಲ್ಲಿ ಘೋಷಿಸಲಾಯಿತು.

ಕೃಷಿ ಮಾರಾಟ ನೀತಿ :
ಕರ್ನಾಟಕ ಸರ್ಕಾರ ಕೃಷಿ ಮಾರಾಟ ಸುಧಾರಣಾ ವರದಿಯನ್ನು ಸಚಿವ ಸಂಪುಟ ಉಪ ಸಮಿತಿಯಲ್ಲಿ ಪರಿಶೀಲಿಸಿ, ಅನುಷ್ಟಾನಕ್ಕಾಗಿ ಸಚಿವ ಸಂಪುಟ ಸಭೆಗೆ ಶಿಫಾರಸ್ಸು ಮಾಡಿತು. ಕೃಷಿಕರ ಹಿತದೃಷ್ಟಿಗಾಗಿ ಮಾರುಕಟ್ಟೆಗಳಲ್ಲಿ ವಿದ್ಯುನ್ಮಾನ ವೇದಿಕೆ ಸ್ಥಾಪನೆ ಮಾಡುವುದು ಸೂಕ್ತ ಎಂದು ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು, ಸುಧಾರಣಾ ಸಮಿತಿಯ ವರದಿಯಲ್ಲಿನ ಶಿಫಾರಸ್ಸುಗಳನ್ನು ಕೃಷಿ ಮಾರಾಟ ನೀತಿ ರೂಪದಲ್ಲಿ ಜಾರಿಗೆ ತರಲು ನಿರ್ಧರಿಸಿತು.

“ಕೃಷಿ ಮಾರಾಟ ನೀತಿ”ಯಲ್ಲಿ ಏನಿದೆ…..!!
• ಮಾರಾಟ ಚಟುವಟಿಕೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದು,
• ಸ್ಪರ್ಧೆಯಲ್ಲಿ ಹೆಚ್ಚಳದ ಮೂಲಕ ದಕ್ಷತೆ ಹೆಚ್ಚಿಸುವುದು,
• ಪ್ರಾಥಮಿಕ ಹಂತದಲ್ಲಿ ಹಣಕಾಸು ಸಂಸ್ಥೆಗಳ ಸಂಪರ್ಕವನ್ನು ಕಲ್ಪಿಸಿ ಮಾರಾಟ ವಿಧಾನವನ್ನು ಸರಳೀಕರಣಗೊಳಿಸುವುದು.

ಅನುಷ್ಟಾನದ ಕ್ರಮಗಳು :
• ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಪಾರದರ್ಶಕತೆ ಹಾಗೂ ಸ್ಪರ್ಧೇ ಹೆಚ್ಚಳಕ್ಕಾಗಿ ಉತ್ಪನ್ನಗಳಿಗೆ ಆನ್ ಲೈನ್ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ವ್ಯವಸ್ಥೆಗೆ ಪೂರಕವಾಗುವಂತೆ ಖರೀದಿದಾರರಿಗೆ ಏಕೀಕೃತ ಲೈಸನ್ಸ್ ನೀಡಲಾಗಿದೆ.
ರಾಜ್ಯದಲ್ಲಿನ ವೈಜ್ಞಾನಿಕ ಉಗ್ರಾಣಗಳನ್ನು ಉಪಮಾರುಕಟ್ಟೆ ಪ್ರಾಂಗಣಗಳೆಂದು ಘೋಷಿಸಿ, ರೈತರಿಗೆ/ವರ್ತಕರಿಗೆ ಉಗ್ರಾಣ ಆಧಾರಿತ ಮಾರಾಟ ವ್ಯವಸ್ಥೆಗೆ ಪ್ರೋತ್ಸಾಹಿಸಲಾಗಿದೆ. ಉತ್ಪನ್ನಗಳ ದಾಸ್ತಾನು ಮಾಡಿದ ರೈತರಿಗೆ ಮತ್ತು ವರ್ತಕರಿಗೆ ಗಣಕೀಕೃತ ಉಗ್ರಾಣ ರಶೀತಿ ನೀಡಲಾಗುತ್ತಿದೆ. ಈ ರಶೀದಿ ಆಧಾರದ ಮೇಲೆ ವಿವಿಧ ಬ್ಯಾಂಕ್ ಗಳಲ್ಲಿ ಉಗ್ರಾಣಾಧಾರಿತ ಉತ್ಪನ್ನಗಳ ಮೇಲೆ ಅಡಮಾನ ಸಾಲ ಸೌಲಭ್ಯ ಪಡೆಯಬಹುದಾಗಿದೆ. ನೂತನ ತಂತ್ರಜ್ಞಾನ ಅಳವಡಿಸುವ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಗಳ ಜೋಡಣೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯಿಂದಲೇ ಉತ್ಪನ್ನಗಳ ಖರೀದಿ ಪ್ರಕ್ರಿಯೆಯಲ್ಲಿ ಖರೀದಿದಾರರು ಭಾಗವಹಿಸುವಿಕೆಯಲ್ಲಿ ಹೆಚ್ಚಳವಾಗಿದೆ ಇದರ ಪರಿಣಾಮವಾಗಿ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ ಲಭ್ಯವಾಗುತ್ತಿದೆ. ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಎಲ್ಲಾ ವ್ಯವಹಾರಗಳು ಗಣಕೀಕರಣ ಮಾಡಲಾಗುತ್ತಿದೆ. ಇ-ಪರ್ಮಿಟ್ ತಯಾರಿಕೆ, ಉತ್ಪನ್ನಗಳ ಅವಕ ಮತ್ತು ನಿರ್ಗಮನ ಕಾರ್ಯಗಳು ಕಂಪ್ಯೂಟರ್’ನಲ್ಲಿ ಗಣಕೀಕೃತ ಮಾಡುವ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.
• ಕೃಷಿ ಮಾರಾಟ ಸುಧಾರಣಾ ಪ್ರಕ್ರಿಯೆಗಳ ಬಗ್ಗೆ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಕೃಷಿ ಮಾರಾಟ ಇಲಾಖೆ, ಮಾರುಕಟ್ಟೆ ಸಮಿತಿಗಳು ಮತ್ತು ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಸಂಸ್ಥೆಯ ಸಹಯೋಗದಲ್ಲಿ ರೈತ ಭಾಗೀದಾರರ ಸಭೆಗಳು ಹಾಗೂ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಉತ್ಪನ್ನಗಳಿಗೆ ದೊರೆತ ಬೆಲೆ ಮಾಹಿತಿಯನ್ನು ರೈತರ ಮೊಬೈಲ್ ಗೆ ಎಸ್ ಎಂ ಎಸ್ ಮೂಲಕ ಸಂದೇಶ ಮುಖಾಂತರ ನೀಡಲಾಗುತ್ತಿದ್ದು ಈ ವ್ಯವಸ್ಥೆಯಿಂದ ರೈತರು ತಮ್ಮ ಉತ್ಪನ್ನದ ಮಾರಾಟದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ.
• ಕೃಷಿ ಉತ್ಪನ್ನಗಳ ಪ್ರಾಥಮಿಕ ಮೌಲ್ಯವರ್ಧನೆ ಹಾಗೂ ರೈತರ ಗುಂಪುಗಳ ಸ್ಥಾಪನೆಯ ಮೂಲಕ ಸಂಘಟಿತ ವ್ಯಾಪಾರ ವ್ಯವಸ್ಥೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ನೇರ ಖರೀದಿ ಕೇಂದ್ರಗಳ ಸ್ಥಾಪನೆಯಿಂದಾಗಿ ಉತ್ಪಾದನಾ ಹಂತದಲ್ಲಿಯೇ ಮಾರಾಟ ಸೌಲಭ್ಯಕ್ಕೂ ಅನುಕೂಲ ಕಲ್ಪಿಸುವುದು ರೈತರಿಗೆ ಅತ್ಯಂತ ಉಪಯುಕ್ತವಾಗಿದೆ.
ಈ ರೀತಿ ಸುಧಾರಣೆಗಳೊಂದಿಗೆ ಕರ್ನಾಟಕ ಸರ್ಕಾರ ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಕೃಷಿ ಮಾರಾಟ ಕ್ಷೇತ್ರಕ್ಕೆ ಹೊಸ ರೂಪ ನೀಡಿ, ಕರ್ನಾಟಕ ಕೃಷಿ ಮಾರಾಟ ನೀತಿ-2013ರನ್ನು 2013ರ ಸೆಪ್ಪೆಂಬರ್’ನಲ್ಲಿ ಜಾರಿಗೆ ತಂದು ಅನುಷ್ಠಾನ ಮಾಡಿದ ಕೀರ್ತಿ ಕರ್ನಾಟಕ ರಾಜ್ಯಕ್ಕೆ ಸಂದಿದೆ.

ನಿಯಂತ್ರಣಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳು :

ರಾಜ್ಯದಲ್ಲಿ ಪಾರದರ್ಶಕ ಮತ್ತು ಸಮರ್ಥ ಕೃಷಿ ಮಾರುಕಟ್ಟೆಗಳ ಕಾರ್ಯನಿರ್ವಹಣೆಗಾಗಿ ವಿಶಿಷ್ಟವಾದ ಎಲ್ಲರಿಗೂ ಸಮಾನ ಅವಕಾಶ ಇರುವ ನಿಯಂತ್ರಣ ವಾತಾವರಣವನ್ನು ನಿರ್ಮಿಸುವುದಕ್ಕಾಗಿ ಮತ್ತು ಮೇಲೆ ತಿಳಿಸಿದಂತಹ ನೀತಿಯ ಉದ್ದೇಶಗಳನ್ನು ಮತ್ತು ಕ್ರಮಗಳನ್ನು ಜಾರಿಗೆ ತರುವುದಕ್ಕಾಗಿ ಕರ್ನಾಟಕ ಕೃಷಿ ಉತ್ಪನ್ನ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ನ್ನು ಪುನರ್ ಪರಿಶೀಲಿಸಿ, 2013ನೇ ಡಿಸೆಂಬರ್ ಮತ್ತು ಫೆಬ್ರವರಿ 2014ರಲ್ಲಿ ಇದಕ್ಕೆ ಪೂರಕವಾಗುವಂತೆ ಶಾಸನ ಮತ್ತು ನಿಯಮಗಳಿಗೆ ಸರ್ಕಾರ ತಿದ್ದುಪಡಿ ಮಾಡಿದೆ.

ವಿಶೇಷ ಸಾಂಸ್ಥಿಕ ಸಂಸ್ಥೆ :

ಕರ್ನಾಟಕ ಸರ್ಕಾರ ಮತ್ತು ಎನ್‍ಇಎಂಎಲ್ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಸಂಸ್ಥೆ 2014ರ ಜನವರಿಯಲ್ಲಿ ಉದಯವಾಯಿತು. ಈ ಸಂಸ್ಥೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಗೆ ಅಗತ್ಯವಿರುವ ತಂತ್ರಜ್ಞಾನದ ತಂತ್ರಾಂಶವನ್ನು ಒದಗಿಸಿ ಏಕೀಕೃತ ಮಾರುಕಟ್ಟೆ ವೇದಿಕೆ (ವಿದ್ಯುನ್ಮಾನ ವೇದಿಕೆ)ಯನ್ನು ಹಂತ ಹಂತವಾಗಿ ಸ್ಥಾಪಿಸುತ್ತಿದೆ. ರೈತರು ಮತ್ತು ಖರೀದಿದಾರರ ನಡುವೆ ಉತ್ತಮ ವ್ಯವಹಾರ ಚಟುವಟಿಕೆಗಳನ್ನು ನಡೆಸಲು ವಿದ್ಯುನ್ಮಾನ(ಇ-ಟೆಂಡರ್) ಹರಾಜು ವೇದಿಕೆಯ ನಿರ್ವಹಣೆ, ತಂತ್ರಜ್ಞಾನ ನಿರ್ವಹಣೆಯ ತರಬೇತಿ, ಮಾರುಕಟ್ಟೆಗಳ ಸಾಮರ್ಥ್ಯವೃದ್ದಿ, ಮಾರುಕಟ್ಟೆ ಧಾರಣೆ ಮಾಹಿತಿ ರೈತರ ಮೊಬೈಲ್‍ಗೆ ಎಸ್‍ಎಂಎಸ್ ಮಾಹಿತಿ ನೀಡುವ ಜವಾಬ್ದಾರಿಗಳನ್ನು ವಿಶೇಷ ಸಾಂಸ್ಥಿಕ ಸಂಸ್ಥೆ ನಿರ್ವಹಿಸುತ್ತಿದೆ.

ಮನೋಜ್ ರಾಜನ್, ಐಎಫ್‍ಎಸ್.,
ಅಪರ ಕಾರ್ಯದರ್ಶಿ (ಮಾರುಕಟ್ಟೆ ಸುಧಾರಣೆ),ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ
& ವ್ಯವಸ್ಥಾಪಕ ನಿರ್ದೇಶಕರು/ ಮುಖ್ಯಕಾರ್ಯನಿರ್ವಹಣಾಧಿಕಾರಿ, ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್, ಬೆಂಗಳೂರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s