“ಒಣ ಮೆಣಸಿನಕಾಯಿ ಕಣಜ” ಬ್ಯಾಡಗಿ ಎಪಿಎಂಸಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ:
ಶ್ರೀ. ಮನೋಜ್ ರಾಜನ್
ವ್ಯವಸ್ಥಾಪಕ ನಿರ್ದೇಶಕರು & ಸಿಇಒ,
ರೆಮ್ಸ್, ಬೆಂಗಳೂರು.
ಹಾವೇರಿ ಜಿಲ್ಲೆಯ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ವಹಿವಾಟು ನಡೆಯುವ ಉತ್ಪನ್ನ ಒಣಮೆಣಸಿನಕಾಯಿ, ದಕ್ಷಿಣ ಭಾರತದಲ್ಲಿ ಒಣಮೆಣಸಿಕಾಯಿ ಆವಕವಾಗುವ ಮಾರುಕಟ್ಟೆಗಳ ಪೈಕಿ ಕರ್ನಾಟಕದ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ. 6 ದಶಕಕ್ಕೂ ಹೆಚ್ಚು ಅವಧಿಯಿಂದ ಬ್ಯಾಡಗಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಈ ಮಾರುಕಟ್ಟೆಗೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದ ರೈತರು ಭಾಗೀದಾರರಾಗಿದ್ದಾರೆ. ಬ್ಯಾಡಗಿ ಎಪಿಎಂಸಿಯನ್ನು ಒಣಮೆಣಸಿನಕಾಯಿ ಕಣಜ ಎಂದು ಕರೆಯುವುದು ವಾಡಿಕೆಯಾಗಿದೆ. ಈ ಮಾರುಕಟ್ಟೆಯಲ್ಲಿ ಆವಕವಾಗುವ ಮೆಣಸಿನಕಾಯಿ ಉತ್ಪನ್ನಕ್ಕೆ ದೇಶ ವಿದೇಶಗಳಿಂದ ಅತೀ ಹೆಚ್ಚಿನ ಬೇಡಿಕೆ ಇದೆ, ಇಲ್ಲಿಂದಲೇ ಈ ಉತ್ಪನ್ನವನ್ನು ರಪ್ತು ಮಾಡಲಾಗುತ್ತಿದೆ.
ಇಂತಹ ಪ್ರಖ್ಯಾತಿ ಹೊಂದಿದ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ವ್ಯಾಪಾರ ವಹಿವಾಟು ಈ ಹಿಂದೆ ಮ್ಯಾನುಯಲ್ ಟೆಂಡರ್ ( ಸಿಬ್ಬಂದಿ ಅವಲಂಭಿತ) ಪದ್ದತಿಯಲ್ಲಿ ನಡೆಸಲಾಗುತ್ತಿತ್ತು.
ಪ್ರತಿ ಸೋಮವಾರ ಮತ್ತು ಗುರುವಾರ ಮಾರುಕಟ್ಟೆಗೆ ವಿವಿಧ ಭಾಗಗಳಿಂದ ರೈತರು ಒಣಮೆಣಸಿನಕಾಯಿ ಉತ್ಪನ್ನವನ್ನು ಮಾರಾಟಕ್ಕಾಗಿ ತರುತ್ತಿದ್ದರು. ಮಾರುಕಟ್ಟೆಯಲ್ಲಿ ಮ್ಯಾನುಯೆಲ್ ಟೆಂಡರ್ ಆಗುತ್ತಿದ್ದುದರಿಂದ ರೈತರು ಮತ್ತು ವರ್ತಕರು ಮಾರುಕಟ್ಟೆ ಪ್ರಾಂಗಣದಲ್ಲಿ ವಹಿವಾಟಿಗಾಗಿ ಹೆಚ್ಚು ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಉತ್ಪನ್ನಕ್ಕೆ ಕೈಯಿಂದ ದರ ನಮೂದಿಸಿ ಟೆಂಡರ್ ಪೆಟ್ಟಿಗೆಗೆ ಖರೀದಿದಾರರು ಹಾಕುತ್ತಿದ್ದರು. ಮಾರುಕಟ್ಟೆ ಅಧಿಕಾರಿಗಳು ಲಾಟ್ ನಂಬರ್ ವಾರು ಟೆಂಡರ್ ಡಿಕ್ಲರೇಷನ್ ಸ್ಲಿಪ್ ರೈತರಿಗೆ ನೀಡಲು ಹರಸಹಾಸ ಪಡುವಂತಹ ವ್ಯವಸ್ಥೆಯನ್ನು ತಾವು ಕಂಡಿರಬಹುದು. ದರಪಟ್ಟಿ ಪೂರೈಸಿದ ನಂತರ ರೈತರ ಉತ್ಪನ್ನಗಳನ್ನು ತೂಕ ಮಾಡಿ, ರೈತರಿಗೆ ಲೆಕ್ಕತೀರುವಳಿ ಪಟ್ಟಿಯನ್ನು ಸಿದ್ದಪಡಿಸಿ, ರೈತರಿಗೆ ಹಣ ಪಾವತಿ ಮಾಡುವುದು ವರ್ತಕರು ಖರೀದಿಸಿದ ಉತ್ಪನ್ನವನ್ನು ವರ್ತಕರಿಗೆ ವಿತರಿಸುವುದು ಮತ್ತು ಅವರ ಉತ್ಪನ್ನ ಸಾಗಟ ಮಾಡಲು ಪರ್ಮಿಟ್ ನೀಡುವುದು, ಇಡೀ ಹಗಲು ರಾತ್ರಿಯ ಕಾರ್ಯ ಚಟುವಟಿಕೆಯಾಗಿತ್ತು. ಈ ರೀತಿಯ ಒತ್ತಡದ ಕಾರ್ಯದಿಂದಾಗಿ ಮಾರುಕಟ್ಟೆ ಅಧಿಕಾರಿಗಳು ಎಷ್ಟೇ ಜಾಗೃತಿ ವಹಿಸಿದರೂ ಸರ್ವೆಸಾಮಾನ್ಯವಾಗಿ ಪಾರದರ್ಶಕತೆ ಮತ್ತು ದಕ್ಷತೆ ಕಾಪಾಡಲು ಸಾಧ್ಯವಾಗುತ್ತಿರಲಿಲ್ಲಾ. ಮಾರುಕಟ್ಟೆಗಳಲ್ಲಿ ಈ ರೀತಯ ಅನಾನುಕೂಲಗಳನ್ನು ತಪ್ಪಿಸಿ, ಮಾರುಕಟ್ಟೆಯಲ್ಲಿ ಎಲ್ಲಾ ವಹಿವಾಟುಗಳನ್ನು ಪಾರದರ್ಶಕತೆ, ದಕ್ಷತೆ ಹಾಗೂ ಸರಳತೆಯಿಂದ ನಡೆಸಲು ಏಕೀಕೃತ ಮಾರುಕಟ್ಟೆ ವೇದಿಕೆಯನ್ನು ಸ್ಥಾಪಿಸಲಾಯಿತು.
ರೈತಸ್ನೇಹಿ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಆನ್ಲೈನ್ ಟೆಂಡರ್ (ಇ-ಟೆಂಡರ್):
ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 2014ರ ನವೆಂಬರ್ ಮಾಸದಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆಯನ್ನು ಸ್ಥಾಪಿಸಲಾಯಿತು. ಈ ವೇದಿಕೆಯಡಿ ಮಾರುಕಟ್ಟೆಗೆ ಆವಕವಾದ ಉತ್ಪನ್ನಗಳಿಗೆ ಆನ್ಲೈನ್ ಟೆಂಡರ್ ವ್ಯವಸ್ಥೆ ಮಾಡಲಾಗಿದೆ, ಜೊತೆಗೆ ಉತ್ಪನ್ನ ಖರೀದಿಗೆ ಸ್ಪರ್ಧೆ ಹೆಚ್ಚಿಸುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿದ ಪೂರ್ಣ ಮಾಹಿತಿಯನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಅನುಕೂಲದಿಂದಾಗಿ ಏಕೀಕೃತ ಲೈಸನ್ಸ್ ಪಡೆದ ಹೊರಗಿನ ಖರೀದಿದಾರರು ಉತ್ಪನ್ನದ ಗುಣಧರ್ಮ, ಗುಣವಿಶ್ಲೇಷಣೆಯ ಮಾಹಿತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸಿ, ಆನ್ಲೈನ್ ಟೆಂಡರ್ ನಲ್ಲಿ ವರ್ತಕರು ಇದ್ದ ಸ್ಥಳದಿಂದಲೇ ಭಾಗವಹಿಸಲು ಅನುವು ಮಾಡಲಾಗಿದೆ.
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಹೆಚ್ಚಿಸಿ, ರೈತರ ಉತ್ಪನ್ನಗಳಿಗೆ ನೈಜ ಬೆಲೆ ಕಲ್ಪಿಸುವುದೇ ಪ್ರಮುಖವಾದ ಅಂಶ. ಈ ವ್ಯವಸ್ಥೆಯಿಂದ ಹಗಲು-ರಾತ್ರಿ ರೈತರು ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಲು ಕಾಯುವಂತಹ ಸ್ಥಿತಿ ದೂರವಾಗಿದೆ. ಮಾರುಕಟ್ಟೆಯ ವ್ಯಾಪಾರ ವಹಿವಾಟಿನ ದಿನದಂದು ರೈತರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ತಂದು, ತಮಗೆ ಬೇಕೆನಿಸಿದ ವರ್ತಕರು, ದಲ್ಲಾಲರು ಅಥವಾ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕಾಗಿ ಪ್ರದರ್ಶಿಸಬಹುದು ಮಾರಾಟಕ್ಕಿಟ್ಟ ಉತ್ಪನ್ನಗಳಿಗೆ (ಹುಟ್ಟುವಳಿಗೆ) ಪ್ರತ್ಯೇಕ ಲಾಟ್ ಸಂಖ್ಯೆ ನೀಡಿ ಆವಕಪಟ್ಟಿ ಸಿದ್ದಪಡಿಸಲಾಗುತ್ತದೆ. ಈ ಮಾಹಿತಿಯನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಸ್ಥಳೀಯ ಖರೀದಿದಾರರು ಆನ್ಲೈನ್ ನಲ್ಲು ಉತ್ಪನ್ನಗಳ ಮಾಹಿತಿಯನ್ನು ಪರಿಶೀಲಿಸುತ್ತಾರೆ. ಬಳಿಕ ಖರೀದಿದಾರರು ಅದೇ ದಿನದಂದು ಮಧ್ಯಾಹ್ನ 3 ಗಂಟೆಯವರೆಗೆ ಮಾರುಕಟ್ಟೆ ಸಮಿತಿಯ ಇ-ಟೆಂಡರ್ ಹಾಲ್ನಲ್ಲಿ ಅಥವಾ ಅಂತರ್ಜಾಲದ ಮೂಲಕ ಏಕೀಕೃತ ಮಾರುಕಟ್ಟೆ ವೇದಿಕೆಯ (ರೆಮ್ಸ್) ವೆಬ್ಸೈಟ್ನಲ್ಲಿ ಅಗತ್ಯ ಉತ್ಪನ್ನಕ್ಕೆ ದರಗಳನ್ನು ನಮೂದಿಸುತ್ತಾರೆ. ಸುಮಾರು ಮಧ್ಯಾಹ್ನ 3.30ರ ವೇಳೆಗೆ ಖರೀದಿದಾರರು ನಮೂದಿಸಿದ ಗರಿಷ್ಟ ದರದ ಪಟ್ಟ್ಟಿಯನ್ನು ಅಂತಿಮಗೊಳಿಸಿ, ಟೆಂಡರ್ ಡಿಕ್ಲರೇಶನ್ ಮಾಡಲಾಗುತ್ತಿದೆ. ಈ ಮಾಹಿತಿಯನ್ನು ರೈತರಿಗೆ ಎಸ್ಎಂಎಸ್ ಕೂಡ ಕಳುಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಟೆಂಡರ್ ಡಿಕ್ಲರೇಷನ್ ಸ್ಲಿಪ್ಗಳನ್ನು ಖರೀದಿದಾರರಿಗೆ ಅಂತರ್ಜಾಲದ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ಟಿ.ವಿ.ಪರದೆಯಲ್ಲಿ ಟೆಂಡರ್ ಡಿಕ್ಲರೇಷನ್ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದೆ. ಬಳಿಕ ಅಂದಿನ ದರಕ್ಕೆ ರೈತರು ಒಪ್ಪಿಗೆ ಸೂಚಿಸಿದರೆ, ಉತ್ಪನ್ನದ ತೂಕದ ಪ್ರಕ್ರಿಯೆ ನಡೆಸಿದ ಬಳಿಕ ವಿಕ್ರಿಪಟ್ಟಿ ಅಥವಾ ಅಧಿಕೃತ ಲೆಕ್ಕತೀರುವಳಿ ಪಟ್ಟಿಯನ್ನು ರೈತರಿಗೆ ನೀಡಲಾಗುವುದು. ಈ ವ್ಯವಸ್ಥೆಯಿಂದ ರೈತ ಬಾಂಧವರು ಸಂಜೆಯ ವೇಳೆಗೆ ತಮ್ಮ ತಮ್ಮ ಉತ್ಪನ್ನಕ್ಕೆ ದೊರೆತ, ಮೊತ್ತವನ್ನು ಪಡೆದು ತಮ್ಮ ಗ್ರಾಮಗಳಿಗೆ ತೆರಳಲು ಸಹಾಯಕವಾಗಿದೆ. ಏಕೀಕೃತ ಮಾರುಕಟ್ಟೆಯ ಆನ್ಲೈನ್ ಟೆಂಡರ್ ಪ್ರಕ್ರಿಯೆಗಳಿಂದಾಗಿ ಸಮಯ ಉಳಿತಾಯವಾಗಿದೆ ಮತ್ತು ಪಾರದರ್ಶಕತೆ ವಾತಾವರಣ ಹೆಚ್ಚಾಗಿ ಉತ್ಪನ್ನಗಳಿಗೆ ನೈಜ ಬೆಲೆ ದೊರೆಯುತ್ತಿದೆ ಎಂದು ರೈತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ವರ್ತಕರಿಗೆ ಅವರ ಬೆರಳ ತುದಿಯಲ್ಲಿಯೇ ಟೆಂಡರ್ ಡಿಕ್ಲರೇಷನ್ ಮಾಹಿತಿ, ಮಾರುಕಟ್ಟೆ ದಿನದ ಉತ್ಪನ್ನ ದಾಸ್ತಾನು ಅದೇ ದಿನ ಅವರ ಖಾತೆಗೆ ಜಮಾ ಮಾಡಿದ ವಿವರ ಹಾಗು ಬಹುಮುಖ್ಯವಾಗಿ ಉತ್ಪನ್ನ ಸಾಗಾಣಿಕೆ ಮಾಡಲು ಇ-ಪರ್ಮಿಟ್ ಉತ್ಪನ್ನದ ಹಣ ಪಾವತಿ ಮಾಡಿದ ಕೂಡಲೇ ಯಾವುದೇ ಸಮಯದಲ್ಲಿ ಎಲ್ಲಿಂದಾದರು ಇ-ಪರ್ಮಿಟ್ ಪಡೆಯುವ ಖರೀದಿದಾರರಿಗೆ ಅನುಕೂಲ ಮಾಡಲಾಗಿದೆ.
ಒಟ್ಟಾರೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಸ್ಪರ್ಶದಿಂದ ಇ-ಟೆಂಡರ್ ವ್ಯವಸ್ಥೆ ರೈತಸ್ನೇಹಿಯಾಗಿದೆ. ತೊಂದರೆ ಮುಕ್ತ ಮಾರುಕಟ್ಟೆಯ ಅನುಕೂಲವನ್ನು ಮಾರುಕಟ್ಟೆ ಭಾಗೀದಾರರು ಮತ್ತು ರೈತರು ಪಡೆದುಕೊಂಡು, ಸರ್ಕಾರದ ರೈತಪರವಾದ ಮಹತ್ವಾಕಾಂಕ್ಷೆ ಯೋಜನೆ ಉಪಯುಕ್ತವಾಗಿರಲಿ ಎಂಬುದೇ ನಮ್ಮ ಅಪೇಕ್ಷೆ.
ಬ್ಯಾಡಗಿ ಎಪಿಎಂಸಿಯಲ್ಲಿ ಮ್ಯಾನುಯಲ್ ಟೆಂಡರ್ (2014-15) ಮತ್ತು ಇ-ಮಾರ್ಕೆಟ್ನ ಆನ್ಲೈನ್ ಟೆಂಡರ್(2015-16) ನಿಂದಾದ ಸಾಧನೆಯ ಕುರಿತ ಅಂಕಿಅಂಶಗಳ ವಿವರ: | ||||
---|---|---|---|---|
ವಿವರ | 2014-15 | 2015-16 | ಬೆಳವಣಿಗೆ | |
ಆವಕ ( ಲಕ್ಷ ಕ್ವಿಟಾಂಲ್) | 8.61 | 9.81 | 13.9 | |
ಮಾದರಿ ಧಾರಣೆ ( ರೂ.) | ಕಡ್ಡಿ | 7896 | 8899 | 12.7 |
ಡಬ್ಬಿ | 8800 | 9898 | 12.5/td> | |
ಗುಂಟೂರು | 5279 | 7399 | 40.2/td> | |
ಬೆಲೆ (ರೂ.ಕೋಟಿಗಳಲ್ಲಿ) | 621 | 860 | 38.5 | |
ಮಾರುಕಟ್ಟೆ ಶುಲ್ಕ (ರೂ.ಕೋಟಿಗಳಲ್ಲಿ) | 9.31 | 12.91 | 38.7 | |
ಒಂದು ದಿನದ ವಹಿವಾಟು | ಆವಕ(ಲಕ್ಷ ಚೀಲ) | 1.2 | 2 | 66.7 |
ಲಾಟ್ಸ್ | 14,000 | 21,083 | 50.6 | |
ಬಿಡ್ಸ್ | 80,000 | 107,621 | 34.5 | |
ವರ್ತಕರು | 60 | 195 | 225.0 | |
ಸಮಯ | ಮಾರಾಟದ ದಿನದ ಹಗಲು-ರಾತ್ರಿ | ಮಾರಾಟದ ದಿನದ ಸಂಜೆ.6.30 | ||
ಟೆಂಡರ್ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ | 50 ಜನ | 10 ಜನ | -80.0 |
ಅಂಕಿ ಅಂಶಗಳ ಕೃಪೆ : ಟಿ.ಎ.ಮಹೇಶ್, ಕಾರ್ಯದರ್ಶಿಗಳು, ಬ್ಯಾಡಗಿ,ಎಪಿಎಂಸಿ.
ಬ್ಯಾಡಗಿ ಎಪಿಎಂಸಿಯಲ್ಲಿ 2014-15 ಸಾಲಿನಲ್ಲಿ ಮ್ಯಾನುಯಲ್ ಟೆಂಡರ್ ಮೂಲಕ ವ್ಯಾಪಾರ ವಹಿವಾಟು ನಡೆಸಲಾಗುತ್ತಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಒಂದು ದಿನದ ವ್ಯಾಪಾರ ವಹಿವಾಟಿನ ಚಿತ್ರಣವನ್ನು ಮೇಲ್ಕಂಡ ಅಂಕಿ ಅಂಶಗಳ ಪಟ್ಟಿಯಲ್ಲಿ ಗಮನಿಸಬಹುದಾಗಿದೆ. ಒಂದು ದಿನದ ವಹಿವಾಟಿನ ವಿವರ ಹೀಗಿದೆ, 8.61 ಲಕ್ಷ ಕ್ವಿಂಟಾಲ್ ಒಣಮೆಣಸಿನಕಾಯಿ ಆವಕ, ಈ ಪೈಕಿ ಕಡ್ಡಿಗೆ 7896, ಡಬ್ಬಿ – 8800 ಮತ್ತು ಗುಂಟೂರು 5279 ಮಾದರಿ ಧಾರಣೆ ಲಭ್ಯವಾಗಿದೆ, ಅಂದಿನ ಒಟ್ಟು ವ್ಯಾಪಾರ ವಹಿವಾಟು 621 ಕೋಟಿ ರೂಪಾಯಿಗಳು. ಇದರಿಂದ ಮಾರುಕಟ್ಟೆ ಶುಲ್ಕ ರೂ. 9.31 ಕೋಟಿ ಲಭ್ಯವಾಗಿದೆ. ಅಂದಿನ ಟೆಂಡರ್ ನಲ್ಲಿ 1.2 ಲಕ್ಷ ಚೀಲಗಳ, 14,000 ಲಾಟ್ ಗಳಿಗೆ 80,000 ಬಿಡ್ ಗಳು ನಡೆದಿರುತ್ತದೆ. ಒಟ್ಟಾರೆ, ಟೆಂಡರ್ ಪ್ರಕ್ರಿಯೆಯಲ್ಲಿ 60 ಮಂದಿ ವರ್ತಕರು ಭಾಗವಹಿಸಿರುತ್ತಾರೆ. ಮ್ಯಾನುಯಲ್ ಟೆಂಡರ್ ನಿಂದಾಗಿ ವ್ಯಾಪಾರ ವಹಿವಾಟು ಹಗಲು, ರಾತ್ರಿ ನಡೆಯುತ್ತಿತ್ತು. ಈ ರೀತಿ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸುಮಾರು 50 ಜನ ಮಾರುಕಟ್ಟೆಯ ಸಿಬ್ಬಂದಿಗಳು ಕಾರ್ಯನಿವೃಹಿಸುತ್ತಿದ್ದರು. ರೈತರು ಖರೀದಿದಾರರಿಗೆ ಮತ್ತು ಸಿಬ್ಬಂದಿಗೆ ವಹಿವಾಟು ಸುಗಮವಾಗಿ ಮುಗಿಸಲು ಹರಸಾಹ¸ ಪಡಬೇಕಾಗಿತ್ತು.
ಆನ್ ಲೈನ್ ಟೆಂಡರ್ ವ್ಯವಸ್ಥೆಯನ್ನು ಜಾರಿಗೆ ತಂದ ನಂತರ, ಮಾರುಕಟ್ಟೆಯಲ್ಲಿ ತ್ವರಿತವಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ ಹಾಗೂ ಉತ್ಪನ್ನಕ್ಕೆ ಸ್ಪರ್ಧತ್ಮಕ ಬೆಲೆ ಲಭ್ಯವಾಗಿರುವುದನ್ನು ಕೂಡ 2015-16ರ ಅಂಕಿ ಅಂಶಗಳ ಸಾಲಿನಲ್ಲಿ ಸಂಪೂರ್ಣ ಮಾಹಿತಿಯನ್ನು ಗಮನಿಸಬಹುದಾಗಿದೆ. ಏಕೀಕೃತ ಮಾರುಕಟ್ಟೆ ವೇದಿಕೆಯ ಆನ್ಲೈನ್ ಟೆಂಡರ್ ನಲ್ಲಿ ನಡೆದ ಒಂದು ದಿನದ ವ್ಯಾಪಾರ ವಹಿವಾಟಿನ ವಿವರ ಮೇಲಿನ ಅಂಕಿ ಅಂಶಗಳ ಪಟ್ಟಿಯಲ್ಲಿ ನೀಡಿದಂತೆ, 9.81 ಲಕ್ಷ ಕ್ವಿಂಟಾಲ್ ಒಣಮೆಣಸಿನಕಾಯಿ ಉತ್ಪನ್ನದ ಪೈಕಿ ಕಡ್ಡಿ, 8899/- ರೂ, ಡಬ್ಬಿ – 9898/- ರೂ ಮತ್ತು ಗುಂಟೂರು – 7399/- ರೂ ಉತ್ಪನ್ನದ ಗುಣಧರ್ಮಕ್ಕೆ ಅನುಗುಣವಾಗಿ ಮಾದರಿ ಧಾರಣೆ ಲಭ್ಯವಾಗಿದೆ. ಅಂದು ಮಾರುಕಟ್ಟೆಯಲ್ಲಿ ರೂ 860/- ಕೋಟಿ ವ್ಯಾಪಾರ ವಹಿವಾಟು ನಡೆದಿದೆ. 2014-15ರ ಸಾಲಿಗೆ ಹೋಲಿಸಿದರೆ ಶೇಕಡ 38.5% ರಷ್ಟು ಪ್ರಗತಿಯಾಗಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಮಾರುಕಟ್ಟೆ ಶುಲ್ಕ ಸಂಗ್ರಣೆಯಲ್ಲೂ ಗಣನೀಯ ಹೆಚ್ಚಳವಾಗಿದೆ ರೂ 12.91 ಕೋಟಿ ಕಳೆದ ವರ್ಷಕ್ಕಿಂತ ಶೇಕಡ 38.7 ರಷ್ಟು ಹೆಚ್ಚಳವಾಗಿದೆ.
ಒಂದು ದಿನದ ವಹಿವಾಟಿನಲ್ಲ್ಲಿ 2 ಲಕ್ಷ ಒಣಮೆಣಸಿನಕಾಯಿ ಚೀಲಗಳ 21,083 ಲಾಟುಗಳಿಂದ 1,07,621 ಬಿಡ್ಗಳನ್ನು ಮಾಡಲಾಗಿದೆ. ಈ ವ್ಯಾಪಾರ ವಹಿವಾಟಿನಲ್ಲಿ ಸುಮಾರು 195 ಖರೀದಿದಾರರು ಆನ್ಲೈನ್ ಟೆಂಡರ್ ನಲ್ಲಿ ಭಾಗವಹಿಸಿರುತ್ತಾರೆ. 2014-15ರ ಸಾಲಿಗೆ ಹೋಲಿಸಿದರೆ ಶೇಕಡ 225 % ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿರುವುದನ್ನು ಅಂಕಿ ಅಂಶಗಳ ಪಟ್ಟಿಯಲ್ಲಿ ನೋಡಬಹುದು. ಇನ್ನೂ ಬೆಳಗ್ಗೆ 10 ಗಂಟೆಗೆ ಆನ್ ಲೈನ್ ಟೆಂಡರ್ ಪ್ರಕ್ರಿಯೆ ಆರಂಭವಾದರೆ ಸಂಜೆ 6.30 ವೇಳೆ ರೈತ ಭಾಂಧವರು ತಮ್ಮ ಉತ್ಪನ್ನಕ್ಕೆ ದೊರೆತ ಮೊತ್ತವನ್ನು ಪಡೆದು ಊರುಗಳಿಗೆ ತೆರಳುತ್ತಾರೆ. ಒಟ್ಟು ಒಂದು ದಿನದ ಇ – ಮಾರ್ಕೆಟ್ ನಲ್ಲಿನ ಆನ್ ಲೈನ್ ಟೆಂಡರ್ ಕಾರ್ಯ ವಿಧಾನವನ್ನು ಪೂರ್ಣಗೊಳಿಸಲು ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಸಂಖ್ಯೆ ಗರಿಷ್ಟ 10 ಜನ, ಏಕೀಕೃತ ಮಾರುಕಟ್ಟೆ ವೇದಿಕೆಯಿಂದ ತೊಂದರೆ ಮುಕ್ತ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ ಎಂಬುವುದು ಬಹುಮುಖ್ಯವಾದ ಅಂಶವಾಗಿದೆ.
ಬ್ಯಾಡಗಿ ಎಪಿಎಂಸಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆಗೂ ಹಿಂದಿನ ವಹಿವಾಟು ಮತ್ತು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಒಣಮೆಣಸಿನಕಾಯಿ ಉತ್ಪನ್ನಕ್ಕೆ ಇ-ಟೆಂಡರ್ ವ್ಯವಸ್ಥೆ ಕಲ್ಪಿಸಿದ ಬಳಿಕ ವ್ಯಾಪಾರ ವಹಿವಾಟಿನಲ್ಲಿ ಕಂಡುಬಂದ ಪ್ರಗತಿಯ ತುಲನಾತ್ಮಾಕ ರೇಖಾ ಚಿತ್ರ :
ಶ್ರೀ. ಮನೋಜ್ ರಾಜನ್, ಅಪರ ಕಾರ್ಯದರ್ಶಿ (ಮಾರುಕಟ್ಟೆ ಸುಧಾರಣೆ), ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಒ, ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್, ಬೆಂಗಳೂರು.