ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ (ಅಸ್ಸೇಯಿಂಗ್) ಸೇವೆ – ರೈತಭಾಂಧವರ ಉತ್ಪನ್ನಕ್ಕೆ ಉಚಿತ ಗುಣವಿಶ್ಲೇಷಣೆ ಸೇವೆ

ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ (ಅಸ್ಸೇಯಿಂಗ್) ಸೇವೆ – ರೈತಭಾಂಧವರ ಉತ್ಪನ್ನಕ್ಕೆ ಉಚಿತ ಗುಣವಿಶ್ಲೇಷಣೆ ಸೇವೆ.
– ಮನೋಜ್ ರಾಜನ್,ಬೆಂಗಳೂರು

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿನ ಮಾರಾಟ ವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವಿಧಾನ ಧಾರಣೆ ನಿರ್ಧರಣೆಯ ಮೇಲೆ ಬಹುಮುಖ್ಯವಾದ ಪಾತ್ರವಹಿಸುತ್ತದೆ. ಮಾರುಕಟ್ಟೆಯಲ್ಲಿ ಮಾರಾಟ ವ್ಯವಸ್ಥೆಯಲ್ಲಿ ಗುಣವಿಶ್ಲೇಷಣೆ ಮಾಡಿದ ಉತ್ಪನ್ನಕ್ಕೆ ಖರೀದಿದಾರರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವುದನ್ನು ಮನಗಂಡು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆಗಾಗಿ ಪ್ರತ್ಯೇಕ ಪ್ರಯೋಗಾಲಯಗಳನ್ನು ಸ್ಥಾಪಿಸಲು ಕೃಷಿ ಮಾರಾಟ ಇಲಾಖೆ ಮತ್ತು ರೆಮ್ಸ್ ಸಂಸ್ಥೆ ನಿರ್ಧರಿಸಿತು. ಜೊತೆಗೆ ರೈತ ಭಾಂಧವರ ಉತ್ಪನ್ನಗಳ ಗುಣವಿಶ್ಲೇಷಣೆ ಸೇವೆಯನ್ನು ಉಚಿತವಾಗಿ ಕಲ್ಪಿಸುವ ಮಹತ್ವದ ನಿರ್ಣಯವನ್ನು ಕೈಗೊಂಡು ಅನುಷ್ಠಾನ ಮಾಡಲಾಗಿದೆ.

ಕೃಷಿ ಉತ್ಪನ್ನಗಳ ಭೌತಿಕ ಗುಣವಿಶ್ಲೇಷಣೆ

ಕೃಷಿ ಉತ್ಪನ್ನಗಳ ಭೌತಿಕ ಮಾನದಂಡಗಳ ಅನ್ವಯ ಪರೀಕ್ಷಿಸಿ, ಉತ್ಪನ್ನದಲ್ಲಿನ ಕಸ-ಕಡ್ಡಿ, ತೇವಾಂಶ ಮತ್ತು ಉತ್ಪನ್ನದ ಒಟ್ಟಾರೆ ಗುಣಮಟ್ಟವನ್ನು ನುರಿತ ತಜ್ಞರಿಂದ ಕಂಡುಹಿಡಿಯುವ ಕಾರ್ಯವಿಧಾನಕ್ಕೆ ಗುಣವಿಶ್ಲೇಷಣೆ ಎಂದು ಕರೆಯಲಾಗುತ್ತದೆ.

ಉತ್ಪನ್ನಗಳ ಮಾದರಿ ತೆಗೆಯುವ ಕಾರ್ಯವಿಧಾನ:

• ರೈತರು ಏಕೀಕೃತ ಮಾರುಕಟ್ಟೆ ವೇದಿಕೆಗೆ ತರುವ ಉತ್ಪನ್ನದಲ್ಲಿ ಪ್ರತಿಶತ ಶೇಕಡ 10ರಷ್ಟು ವಿವಿಧ ಭಾಗಗಳಿಂದ ಮಾದರಿಯನ್ನು ತೆಗೆದು ಗುಣವಿಶ್ಲೇಷಣೆಗೆ ಉಪಯೋಗಿಸಲಾಗುತ್ತದೆ.
• ಮಾರುಕಟ್ಟೆಗೆ ತಂದ ಉತ್ಪನ್ನವುಳ್ಳ ಚೀಲಗಳನ್ನು ಯಾದೃಚ್ಛಿಕ (random) ರೀತಿಯಲ್ಲಿ ತೆಗೆದು, ಚೀಲಗಳಲ್ಲಿರುವ ಉತ್ಪನ್ನಗಳನ್ನು ಸುರಿದು, ರಾಶಿಯ ವಿವಿಧ ಭಾಗಗಳಿಂದ, ಅಂದರೆ ರಾಶಿಯ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ತುದಿ, ಮಧ್ಯ ಹಾಗೂ ತಳಭಾಗಗಳಿಂದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.
• ಮಾರಾಟಗಾರರು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಉತ್ಪನ್ನವನ್ನು ಪ್ಯಾಕ್ ಮಾಡಿ (ಗೋಣಿ ಚೀಲದಲ್ಲಿ) ತರಬಹುದು ಅಥವಾ ಹಾಗೆ ರಾಶಿ ರೂಪದಲ್ಲಿ ತರಬಹುದು, ಮಾದರಿ ತೆಗೆಯುವುದಕ್ಕಾಗಿ (ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತದೆ.
• ಪ್ಯಾಕ್ ಮಾಡಿದ ರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿ ಚೀಲದ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ಧಪಡಿಸುವುದು ಮತ್ತು ಸರಿಯಾಗಿ ಮಿಶ್ರಣ ಮಾಡುವುದು. ಇದನ್ನು ‘ಬಲ್ಕ್ ಸ್ಯಾಂಪಲ್’ ಎಂದು ಕರೆಯಲಾಗುವುದು.
• ಒಂದು ವೇಳೆ ಉತ್ಪನ್ನಗಳ ಲಾಟನ್ನು ರಾಶಿ ರೂಪದಲ್ಲಿ ತಂದಾಗ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸಂಗ್ರಹಿಸಿ, ನಂತರ ಈ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸಲಾಗುವುದು.
• ಕಾಂಪೋಸಿಟ್ ಸ್ಯಾಂಪಲ್ (ಸಂಯುಕ್ತ ಮಾದರಿ) ಸಿದ್ಧಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ ಅಗತ್ಯವಿರುವ ಪ್ರಮಾಣದ ಉತ್ಪನ್ನ ತೆಗೆಯುವುದು.
• ಈ ರೀತಿ ಸಿದ್ಧಪಡಿಸಿದ ಸಂಯುಕ್ತ ಮಾದರಿಯ ಉತ್ಪನ್ನದಿಂದ ಸ್ಯಾಂಪಲ್ ಡಿವೈಡರ್ ಸಹಾಯದಿಂದ ಸಮನಾಗಿ ಬೇರ್ಪಡಿಸಿ, ಒಂದು ಭಾಗವನ್ನು ಭೌತಿಕ ಗುಣವಿಶ್ಲೇಷಣೆಗಾಗಿ ಉಪಯೋಗಿಸಲಾಗುತ್ತದೆ ಮತ್ತು ಉಳಿದ ಒಂದು ಭಾಗವನ್ನು ಪ್ರಯೋಗಾಲಯದಲ್ಲಿ (Reference Sample) ರೆಫರೆನ್ಸ್ ಗಾಗಿ ಇಡಲಾಗುತ್ತದೆ.
• ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ಪ್ರತಿಯೊಂದು ಚೀಲಕ್ಕೆ ಗುರುತಿನ ಚೀಟಿಯನ್ನು ಲಗತ್ತಿಸಿ ಪ್ಯಾಕ್ ಮಾಡಿ ಸಂಗ್ರಹಿಸಲಾಗುವುದು.
• ಸಂಗ್ರಹಿಸಿದ  ಉತ್ಪನ್ನದ ಮಾದರಿಯ ಸಂಪೂರ್ಣ ವಿವರಗಳನ್ನು ದಾಖಲಾತಿ ಪುಸ್ತಕದಲ್ಲಿ ನೊಂದಯಿಸಲಾಗುತ್ತದೆ.

ಗುಣವಿಶ್ಲೇಷಣೆ ಕಾರ್ಯವಿಧಾನ:

ಉತ್ಪನ್ನಗಳ ಮಾದರಿಗಳನ್ನು ಪರೀಕ್ಷಿಸಿದಾಗ ಯಾವುದೇ ಜೀವವಿರುವ ಕ್ರಿಮಿಕೀಟಗಳ ಲಭ್ಯತೆ ಬಗ್ಗೆ ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಪತ್ತೆಯಾದಲ್ಲಿ ಅಂತಹ ಲಾಟ್‍ ಅನ್ನು ತಿರಸ್ಕರಿಸಲಾಗುವುದು ಹಾಗೂ ಉತ್ಪನ್ನದಲ್ಲಿ ಯಾವುದೇ ಕೃತಕ ರಾಸಾಯನಿಕ ಬಣ್ಣ ಅಥವಾ ಬೂಸ್ಟ್ ಹಿಡಿದ ಬಗ್ಗೆಯು ಕೂಡ ಪರೀಕ್ಷಿಸಲಾಗುತ್ತದೆ. ತದನಂತರ ಮಾದರಿಯನ್ನು ಗುಣಧರ್ಮಗಳ ವಿಶ್ಲೇಷಣೆಗಾಗಿ ಭೌತಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ರೀತಿಯಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿದ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್ ಲೋಡ್ ಮಾಡುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕಲ್ಪಿಸಲಾಗಿದೆ. ಈ ಕಾರ್ಯವಿಧಾನದಿಂದಾಗಿ ದೂರದ ಖರೀದಿದಾರರು ಉತ್ಪನ್ನಗಳ ಮೇಲೆ ವಿಶ್ವಾಸವಿಟ್ಟು, ಆನ್‍ಲೈನ್‍ನಲ್ಲಿ ಲಭ್ಯವಾಗುವ ಉತ್ಪನ್ನದ ಗುಣವಿಶ್ಲೇಷಣೆ ಮಾಹಿತಿಯನ್ನು ಪರಿಶೀಲಿಸಿ, ಅಗತ್ಯ ಉತ್ಪನ್ನಗಳನ್ನು ಖರೀದಿ ಮಾಡಲು ಆನ್‍ಲೈನ್ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಒಟ್ಟಾರೆ ವಿಶ್ವಾಸಾರ್ಹ ಉತ್ಪನ್ನಗಳ ಗುಣವಿಶ್ಲೇಷಣೆ ಕ್ರಮದಿಂದಾಗಿ ಖರೀದಿ ಪ್ರಕ್ರಿಯೆಯಲ್ಲಿ ಸ್ಪರ್ಧೆ ಏರ್ಪಟ್ಟು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಮಾರಾಟವಾಗುವ ಉತ್ಪನ್ನಗಳಿಗೆ ನೈಜ ಬೆಲೆ ದೊರೆಯುವಂತಾಗಲಿದೆ.

ಗುಣವಿಶ್ಲೇಷಣಾ ಕೇಂದ್ರಗಳು

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಸಂಸ್ಥೆಯು ರಾಜ್ಯ ಕೃಷಿ ಮಾರಾಟ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಕವಾಗಿ ಹುಬ್ಬಳ್ಳಿ, ಗದಗ, ಮುಂಡರಗಿ, ಬಳ್ಳಾರಿ, ಚಿತ್ರದುರ್ಗ, ತಿಪಟೂರು, ಕೊಪ್ಪಳ, ರೋಣ, ಲಕ್ಷ್ಮೇಶ್ವರ ಸೇರಿದಂತೆ 10 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ವೈಜ್ಞಾನಿಕ ಗುಣವಿಶ್ಲೇಷಣೆ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳಲ್ಲಿ ರೈತರು ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಸೇವೆಯನ್ನು ಉಚಿತವಾಗಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

ಎರಡನೇ ಹಂತದಲ್ಲಿ ಬಾಗಲಕೋಟೆ, ಭದ್ರಾವತಿ, ಭೀಮಸಮುದ್ರ, ಬೀದರ್, ಬೀರೂರು, ಚಳ್ಳಕೆರೆ, ಚನ್ನಗಿರಿ, ದಾವಣಗೆರೆ, ಧಾರವಾಡ, ಗುಬ್ಬಿ, ಹರಪ್ಪನಹಳ್ಳಿ, ಹಿರಿಯೂರು, ಹೊಸದುರ್ಗ, ಹೊಸನಗರ, ಹುಳಿಯಾರು, ಕಡೂರು, ಕೊಟ್ಟೂರು, ಮೈಸೂರು, ರಾಯಚೂರು, ರಾಮದುರ್ಗ, ಸಾಗರ, ಶಿವಮೊಗ್ಗ, ಸಿದ್ದಾಪುರ, ಸಿರಾ, ಸಿರ್ಸಿ, ತೀರ್ಥಹಳ್ಳಿ, ತುಮಕೂರು, ಯಾದಗಿರಿ, ಯಲ್ಲಾಪುರ, ಅರಸೀಕೆರೆ ಸೇರಿದಂತೆ 30 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲು ಉದ್ಧೇಶಿಸಲಾಗಿದೆ.

Leave a Reply