ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಸ್ಪಧ್ಮಾತ್ಮಕ ಬೆಲೆ ಪಡೆಯಲು ಅನುಸರಿಸಬೇಕಾದ ಕ್ರಮಗಳು ಮತ್ತು ಅದರ ಅನುಕೂಲತೆಗಳ ಬಗ್ಗೆ ತಿಳಿಸುವುದೇ ಈ ಲೇಖನದ ಪ್ರಮುಖ ಉದ್ದೇಶವಾಗಿದೆ.
ರಾಮಣ್ಣ ಮತ್ತು ಶಾಮಣ್ಣ ಎಂಬ ಇಬ್ಬರು ರೈತರ ಕಾಲ್ಪನಿಕವಾದ ಎರಡು ಪಾತ್ರಗಳ ಮೂಲಕ ಬೆಳೆ ಕೊಯ್ಲಿನಿಂದ ಹಿಡಿದು ಬೆಳೆಯನ್ನು ಮಾರುಕಟ್ಟೆಗೆ ತಂದು, ಮಾರಾಟ ಪ್ರಕ್ರಿಯೆಗಳಲ್ಲಿ ಭಾಗವಹಿಸಿ, ಉತ್ಪನ್ನಗಳಿಗೆ ನೈಜ ಬೆಲೆ ಪಡೆಯುವ ಕಾರ್ಯವಿಧಾನಗಳ ಕುರಿತು ಚಿತ್ರಾದಿಗಳ ಜೊತೆ ವಿವರವಾದ ಮಾಹಿತಿ ಕಲ್ಪಿಸಲಾಗಿದೆ.
ರಾಮಣ್ಣ ಸಕಾಲದಲ್ಲಿ ಬೆಳೆಯನ್ನು ಕೊಯ್ಲು ಮಾಡಿ, ಒಣಗಿಸಿ, ಸ್ವಚ್ಚ ಮಾಡಿ, ಗುಣ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸಿ, ಉತ್ಪನ್ನವನ್ನು ಮಾರಾಟಕ್ಕಾಗಿ ಪ್ಯಾಕಿಂಗ್ ಮಾಡುತ್ತಿರುವುದು.
ಶಾಮಣ್ಣ ಬೆಳೆಯನ್ನು ಕೊಯ್ಲು ಮಾಡಿ, ಸರಿಯಾಗಿ ಒಣಗಿಸದೆ, ಸ್ವಚ್ಚ ಮಾಡದೆ, ಗುಣ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸದೆ ಉತ್ಪನ್ನವನ್ನು ಮಾರಾಟಕ್ಕಾಗಿ ಪ್ಯಾಕ್ ಮಾಡುತ್ತಿರುವುದು.
ರಾಮಣ್ಣ ಮತ್ತು ಶಾಮಣ್ಣ ಉತ್ಪನ್ನಗಳೊಂದಿಗೆ ಎಪಿಎಂಸಿಗೆ ಆಗಮಿಸಿ ಮಾರುಕಟ್ಟೆ ಮುಖ್ಯ ದ್ವಾರದಲ್ಲಿ ಗೇಟ್ ಎಂಟ್ರಿ ಮಾಡಿಸಿದರು. ರಾಮಣ್ಣ ಅವರ ಉತ್ಪನ್ನಕ್ಕೆ ಲಾಟ್ ನಂಬರ್-1 ಮತ್ತು ಶಾಮಣ್ಣ ಅವರ ಉತ್ಪನ್ನಕ್ಕೆ ಲಾಟ್ ನಂಬರ್-2 ಎಂಬ ಯುನಿಕ್(ವಿಶೇಷ) ಲಾಟ್ ಸಂಖ್ಯೆಯನ್ನು ಎಪಿಎಂಸಿಯಲ್ಲಿ ನೀಡಲಾಯಿತು.
ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕೆ ಸಿದ್ದಪಡಿಸಿದ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡಿಸಲು ರಾಮಣ್ಣ ಒಪ್ಪಿಗೆ ಸೂಚಿಸಿದರು.
ಏಕೀಕೃತ ಮಾರುಕಟ್ಟೆಯಲ್ಲಿನ ಗುಣವಿಶ್ಲೇಷಣೆ ಪ್ರಯೋಗಾಲಯದ ತಜ್ಞರಿಗೆ ಶಾಮಣ್ಣ ತನ್ನ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡುವುದು ಬೇಡ ಎಂದು ನಿರಾಕರಿಸುತ್ತಿರುವುದು.
ಗುಣವಿಶ್ಲೇಷಣೆ ಪ್ರಯೋಗಾಲಯ
ರಾಮಣ್ಣ ಅವರ ಉತ್ಪನ್ನದ ಗುಣವಿಶ್ಲೇಷಣೆಯ ಫಲಿತಾಂಶದ ದತ್ತಾಂಶ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಆನ್ಲೈನ್ನಲ್ಲಿ ಪ್ರಸಾರ ಮಾಡಲಾಯಿತು.
ರಾಮಣ್ಣ ಅವರ ಲಾಟ್ ನಂಬರ್-1 ಉತ್ಪನ್ನ ಮತ್ತು ಶಾಮಣ್ಣ ಅವರ ಲಾಟ್ ನಂಬರ್-2 ಉತ್ಪನ್ನವನ್ನು ಸ್ಥಳೀಯ ಖರೀದಿದಾರರು ಪರೀಕ್ಷಿಸುತ್ತಿರುವ ದೃಶ್ಯವನ್ನು ಚಿತ್ರದಲ್ಲಿ ನೋಡಬಹುದು, ಲಾಟ್ ನಂಬರ್-1ರಲ್ಲಿ ಉತ್ಪನ್ನ ಗುಣವಿಶ್ಲೇಷಣೆ ಮಾಡಿದ ಮಾಹಿತಿ ಲಭ್ಯವಿದೆ. ಲಾಟ್ ನಂಬರ್–2 ರಲ್ಲಿ ಗುಣವಿಶ್ಲೇಷಣೆ ಮಾಡಿದ ವಿವರಗಳು ಇಲ್ಲದಿರುವುದನ್ನು ಕಾಣಬಹುದು.
ಆನ್ಲೈನ್ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಥಳೀಯ, ರಾಜ್ಯದ ಹೊರ ಎಪಿಎಂಸಿ ಮಾರುಕಟ್ಟೆ ಹಾಗೂ ಹೊರ ರಾಜ್ಯಗಳಿಂದ ಏಕೀಕೃತ ಲೈಸೆನ್ಸ್ ಪಡೆದ ಖರೀದಿದಾರರು ಇ-ಟೆಂಡರ್ ನಲ್ಲಿ ಭಾಗವಹಿಸುವ ಕಾರ್ಯವಿಧಾನವನ್ನು ಮೇಲಿನ ಚಿತ್ರದಲ್ಲಿ ನೋಡಬಹುದು.
ಬೆಳೆಗೆ ಸ್ಪರ್ಧಾತ್ಮಕ ಬೆಲೆ ಪಡೆದ ರಾಮಣ್ಣ ಹರ್ಷ ವ್ಯಕ್ತಪಡಿಸುತ್ತಿರುವುದನ್ನು ಚಿತ್ರದಲ್ಲಿ ಗಮನಿಸುವುದು.
ಇ-ಟೆಂಡರ್ ನಲ್ಲಿ ರಾಮಣ್ಣ ಅವರ ಲಾಟ್ ನಂಬರ್-1ಕ್ಕೆ ಹೆಚ್ಚು ಖರೀದಿದಾರರು ಬಿಡ್ ಮಾಡಿರುತ್ತಾರೆ. ಕಾರಣ ರಾಮಣ್ಣ ತನ್ನ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡಿಸಿ, ಅದರ ವಿವರವನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಿಸಿದ್ದರಿಂದ ಸ್ಥಳೀಯ ಖರೀದಿದಾರರಲ್ಲದೆ ರಾಜ್ಯ ವ್ಯಾಪ್ತಿಯಲ್ಲಿನ ಎಪಿಎಂಸಿಗಳಲ್ಲಿ ವ್ಯವಹರಿಸುವ ಖರೀದಿದಾರರು ಮತ್ತು ಹೊರ ರಾಜ್ಯಗಳ ವರ್ತಕರು ಇ-ಟೆಂಡರ್ ನಲ್ಲಿ ಭಾಗವಹಿಸಿದ್ದರು, ಇದರಿಂದ ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ, ರಾಮಣ್ಣನವರ ಉತ್ಪನ್ನಕ್ಕೆ ನೈಜ ಬೆಲೆ ಲಭ್ಯವಾಯಿತು. ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ನೂತನ ಸೌಲಭ್ಯದಿಂದಾಗಿ ಉತ್ತಮ ಬೆಲೆ ಲಭ್ಯವಾಯಿತು.
ಅದೇ ರೀತಿ ಶಾಮಣ್ಣ ತನ್ನ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡಿಸದೇ ಬೆಳೆಯನ್ನು ಮಾರಾಟ ಮಾಡಲು ಸಿದ್ದಪಡಿಸಿದ್ದರಿಂದ ಇ-ಟೆಂಡರ್ ನಲ್ಲಿ ಕೇವಲ ಸ್ಥಳೀಯ ಖರೀದಿದಾರರು ಬಿಡ್ಡಿಂಗ್ ಮಾಡಿರುತ್ತಾರೆ. ಆದ್ದರಿಂದ ಶಾಮಣ್ಣನ ಬೆಳೆಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗಲಿಲ್ಲ.
ರಾಮಣ್ಣ ಅವರಿಂದ ರೈತ ಮಿತ್ರರಿಗೆ ಮಾರ್ಗದರ್ಶನ
ಬೆಳೆಯನ್ನು ಸಕಾಲದಲ್ಲಿ ಕೊಯ್ಲು ಮಾಡಿ, ಸರಿಯಾಗಿ ಒಣಗಿಸಿ, ಸ್ವಚ್ಛ ಮಾಡಿ, ವರ್ಗೀಕರಿಸಿ, ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಗುಣವಿಶ್ಲೇಷಣೆ ಮಾಡಿಸಿದರೆ, ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ ರೈತರ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.
ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆಯಿಂದ ರೈತ ಬಾಂಧವರಿಗೆ ಆಗುವ ಲಾಭಗಳು:-
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್ಲೈನ್ ಟೆಂಡರ್ನಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಬರುವ ಮುನ್ನಾ ರೈತರು ಕೆಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಿದೆ. ಬೆಳೆಯನ್ನು ಸಕಾಲದಲ್ಲಿ ಕಟಾವು ಮಾಡಿ, ಉತ್ಪನ್ನಕ್ಕೆ ಅನುಗುಣವಾಗಿ ಒಣಗಿಸಿ, ಸ್ವಚ್ಚ ಮಾಡಿ, ಗುಣ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸಿ, ಉತ್ಪನ್ನಗಳನ್ನು ಸರಿಯಾಗಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ತರುವುದು ಅತ್ಯಗತ್ಯ. ಇದರಿಂದ ಉತ್ಪನ್ನದ ಗುಣಮಟ್ಟವನ್ನು ಮಾರುಕಟ್ಟೆಯಲ್ಲಿನ ಸ್ಥಳೀಯ ಖರೀದಿದಾರರು ಪರೀಕ್ಷಿಸಲು ಅನುಕೂಲವಾಗಲಿದೆ, ಅದೇ ರೀತಿ ಹೊರ ಮಾರುಕಟ್ಟೆ ಮತ್ತು ಹೊರ ರಾಜ್ಯಗಳ ಖರೀದಿದಾರರು ಆನ್ಲೈನ್ನಲ್ಲಿ ಉತ್ಪನ್ನಗಳ ಅವಕ ಮತ್ತು ಗುಣಧರ್ಮಗಳನ್ನು ಪರಿಶೀಲಿಸಿ ಆನ್ಲೈನ್ ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಇದರಿಂದ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಏರ್ಪಟ್ಟು, ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿಸಲು ರೈತರು ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಈ ಸೇವೆ ರೈತ ಬಾಂಧವರಿಗೆ ಉಚಿತವಾಗಿ ಕಲ್ಪಿಸಲಾಗಿದೆ. ಈಗಾಗಲೇ 40 ಎಪಿಎಂಸಿ ಮಾರುಕಟ್ಟೆಗಳಲ್ಲಿ ಗುಣವಿಶ್ಲೇಷಣೆ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಹಂತ ಹಂತವಾಗಿ ಎಲ್ಲಾ ಏಕೀಕೃತ ಮಾರುಕಟ್ಟೆ ವೇದಿಕೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು. ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ಮಾಹಿತಿಯನ್ನು ಇ-ಟೆಂಡರ್ ವೇದಿಕೆಯಲ್ಲಿನ ಅಪ್ ಲೋಡ್ ಮಾಡಲಾಗುವುದು. ಸದರಿ ಮಾಹಿತಿಯನ್ನು ಪರಿಶೀಲಿಸಿದ ದೂರದ ಖರೀದಿದಾರರು ಆನ್ಲೈನ್ ಬಿಡ್ಡಿಂಗ್ನಲ್ಲಿ ಅಗತ್ಯ ಉತ್ಪನ್ನಗಳನ್ನು ಖರೀದಿಸಲು ಅನುಕೂಲವಾಗುತ್ತದೆ.. ಈ ನೂತನ ವ್ಯವಸ್ಥೆಯ ಖರೀದಿ ಪ್ರಕ್ರಿಯೆಯಲ್ಲಿ ಸ್ಪರ್ಧೆ ಹೆಚ್ಚಾಗಿ ಉತ್ಪನ್ನಗಳಿಗೆ ನೈಜ ಬೆಲೆ ದೊರೆಯುವಂತಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗುತ್ತಿರುವ ಏಕೀಕೃತ ಮಾರುಕಟ್ಟೆ ವೇದಿಕೆಗಳಲ್ಲಿ ರೈತರ ಅನುಕೂಲಕ್ಕಾಗಿ ಕಲ್ಪಿಸಿರುವ ಉತ್ಪನ್ನಗಳ ಉಚಿತ ಗುಣವಿಶ್ಲೇಷಣೆ ಸೇವೆಯ ಲಾಭವನ್ನು ರೈತ ಬಾಂಧವರು ಪಡೆದುಕೊಳ್ಳುವುದರೊಂದಿಗೆ, ರೈತರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಈ ಮಹತ್ವಾಕಾಂಕ್ಷೆಯ ನೂತನ ಯೋಜನೆಯ ಲಾಭ ನಿಮಗೆ ದೊರೆಯಲಿ ಎಂಬುವುದೇ ನಮ್ಮ ಅಪೇಕ್ಷೆ.
Great achievement by REMSL organization
LikeLike